== ಮಾನಸ್ ವನ್ಯಜೀವಿಧಾಮ == ಮಾನಸ್ ವನ್ಯಜೀವಿ ಧಾಮವು ಭಾರತದ ಅಸ್ಸಾಂ ರಾಜ್ಯದಲ್ಲಿದೆ. ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಘೋಷಿಸಿದೆ. ಅಲ್ಲದೆ 'ಮಾನಸ್ ವನ್ಯಜೀವಿ ಧಾಮವು ಪ್ರಾಜೆಕ್ಟ್ ಟೈಗರ್ ಮೀಸಲು, ಆನೆ ಮೀಸಲು ಮತ್ತು ಜೀವಗೋಲ ಮೀಸಲು ವಲಯವೆಂದು ಸಹ ಘೋಷಿಸಲ್ಪಟ್ಟಿದೆ. ಹಿಮಾಲಯದ ಪಾದದಲ್ಲಿರುವ ಮಾನಸ್ ವನ್ಯಜೀವಿ ಧಾಮವು ಭೂತಾನ್ ರಾಷ್ಟ್ರದಲ್ಲಿ ಸಹ ಕೊಂಚ ಭಾಗ ವ್ಯಾಪಿಸಿದೆ. ಮಾನಸ್ ವನ್ಯಜೀವಿ ಧಾಮವು ಅಸ್ಸಾಂನ ಸೂರುಳ್ಳ ಆಮೆ, ಹಿಸ್ಪಿಡ್ ಮೊಲ, ಚಿನ್ನದ ಬಣ್ಣದ ಲಂಗೂರ್ ಮತ್ತು ಪಿಗ್ಮಿ ಕಾಡುಹಂದಿ ಗಳಂತಹ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ನೆಲೆಯಾಗಿದೆ. ಈ ನಾಲ್ಕು ಬಗೆಯ ಪ್ರಾಣಿಗಳು ವಿಶ್ವದ ಬೇರೆ ಯಾವುದೇ ಭಾಗದಲ್ಲಿ ಕಾಣಬರುವುದಿಲ್ಲ. ಈ ಧಾಮದ ಹೆಸರು ಇಲ್ಲಿ ಹರಿಯುವ ಮಾನಸ್ ನದಿಯಿಂದ ಬಂದಿರುತ್ತದೆ. ಈ ನದಿಯು ಬ್ರಹ್ಮಪುತ್ರ ಮಹಾನದಿಯ ಒಂದು ಪ್ರಮುಖ ಉಪನದಿಯಾಗಿದೆ. ಸುಮಾರು ೩೯೧ ಚದರ ಕಿ.ಮೀ. ಗಳಷ್ಟು ವಿಸ್ತಾರವಾಗಿರುವ ಮಾನಸ್ ವನ್ಯಜೀವಿ ಧಾಮವು ಸರಾಸರಿ ಸಮುದ್ರ ಮಟ್ಟದಿಂದ ೬೧ ರಿಂದ ೧೧೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಮಾನಸ್ ವನ್ಯಜೀವಿ ಧಾಮದ ಪ್ರದೇಶದಲ್ಲಿ ೩೭೪ ತಳಿಗಳ ಗಿಡಮರಗಳು, ೫೫ ತಳಿಯ ಸಸ್ತನಿಗಳು, ೩೮೦ ಪ್ರಕಾರದ ಪಕ್ಷಿಗಳು, ೫೦ ತಳಿಗಳ ಉರಗಗಳು ಮತ್ತು ೩ ಪ್ರಬೇಧದ ದ್ವಿಚರಿಗಳನ್ನು ಗುರುತಿಸಲಾಗಿದೆ. ಇಲ್ಲಿನ ಪ್ರಾಣಿ ಸಂಕುಲದಲ್ಲಿ ೩೧ ತಳಿಗಳು ಅಳಿವಿನಂಚಿನಲ್ಲಿರುವುದಾಗಿ ಘೋಷಿಸಲ್ಪಟ್ಟಿವೆ. ಮೇಲೆ ತಿಳಿಸಿದ ಪ್ರಾಣಿಗಳ ಹೊರತಾಗಿ ಮಾನಸ್ ವನ್ಯಜೀವಿ ಧಾಮವು ಏಷ್ಯನ್ ಆನೆ, ಭಾರತದ ಘೇಂಡಾಮೃಗ, ಕಾಡೆಮ್ಮೆ, ನೀರೆಮ್ಮೆ, ಬಾರಾಸಿಂಘಾ, ಹುಲಿ, ಚಿರತೆ, ಕರಡಿ ಮತ್ತು ಹಲವು ಪ್ರಕಾರದ ಕೋತಿ ಮತ್ತು ಜಿಂಕೆಗಳಿಗೆ ವಾಸಸ್ಥಾನವಾಗಿದೆ. == ಇವನ್ನೂ ನೋಡಿ == ಅಸ್ಸಾಂ ವಿಶ್ವ ಪರಂಪರೆಯ ತಾಣ == ಬಾಹ್ಯ ಸಂಪರ್ಕಕೊಂಡಿಗಳು == ಕಾಜಿರಂಗ ಮತ್ತು ಮಾನಸ್ ಗಳಿಗೆ ಒಂದು ಪ್ರವಾಸ ಮಾನಸ್‌ನ ರಕ್ಷಕರು ಮಾನಸ್ ವನ್ಯಜೀವಿ ಧಾಮದ ಅಧಿಕೃತ ಅಂತರಜಾಲ ತಾಣ 2013-09-26 ವೇಬ್ಯಾಕ್ ಮೆಷಿನ್ ನಲ್ಲಿ. : - 2012-04-07 ವೇಬ್ಯಾಕ್ ಮೆಷಿನ್ ನಲ್ಲಿ.